ನ್ಯಾಷ್, ತಾಮಸ್ -
1567-1601. ಇಂಗ್ಲಿಷ್ ವಿಡಂಬನಕಾರ ಸುಸಂಸ್ಕøತ, ಸಾಹಸಿ, ಅಂದಿಗೆ ವಿಡಂಬನಕಾರನೆಂದು ಹೆಸರಾಗಿದ್ದ ರಾಬರ್ಟ್ ಗ್ರೀನನ ಉತ್ತರಾಧಿಕಾರಿ. ಇಪ್ಪತ್ತೈದು ವರ್ಷಕ್ಕೇನೆ ಒಳ್ಳೆಯ ವಿದ್ವತ್ತನ್ನು ಗಳಿಸಿ, ರೋಮಿನ ಸುಪ್ರಸಿದ್ಧ ವಿಡಂಬನಕಾರ ಜೂವನಲ್‍ನನ್ನು ಹೋಲುತ್ತಿದ್ದುದರಿಂದ ಈತನನ್ನು ಕಿರಿಯ ಜೂವನಲ್ ಎಂದೇ ಕರೆಯುತ್ತಿದ್ದರು. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಲಂಡನ್‍ನಲ್ಲಿ ನೆಲಸಿ ಗ್ರೀನನ ಸ್ನೇಹಿತನಾದ. ಆಗ ವಿವಾದಕ್ಕೀಡಾಗಿದ್ದ ಎರಡು ಮತ ಪಂಥದವರಾದ ಇಪಿಸ್ಕಪಾಲ್ಯನರು ಮತ್ತು ಪೂರಿಟನರ ಮಧ್ಯೆ ಪ್ರವೇಶಿಸಿ ತನ್ನ ನೇರ ತೀಕ್ಷ್ಣ ಲೇಖನಿಯಿಂದ ಪೂರಿಟನ್ನರನ್ನು ಖಂಡಿಸಿದ. ಇವನ ಶತ್ರುಗಳಲ್ಲಿ ಕವಿ ಎಡ್‍ಮಂಡ್ ಸ್ಪೆನ್ಸರ್‍ನ ಗೆಳೆಯನಾದ ಗೇಬ್ರಿಯಲ್ ಹಾರ್ವೆ ಮುಖ್ಯನಾದವ.

	ಗದ್ಯ ಕ್ಷೇತ್ರದಲ್ಲಿ ನ್ಯಾಷ್ ಹೊಸ ರೀತಿಯಲ್ಲಿ ಬರೆಯಲಾರಂಭಿಸಿದ. ಇವನದು ಅಡುನುಡಿಗೂ ಭಾವಗೀತಾತ್ಮಕ ಗದ್ಯಕ್ಕೂ ನಡುವಣ ಶೈಲಿ. ಗ್ರೀನನ ಮೆನಾಫನ್ ಕೃತಿಗೆ ಬರೆದ ಮುನ್ನುಡಿಯಲ್ಲಿ ಶಾಸ್ತ್ರೀಯ ಪರಂಪರೆಯನ್ನು ಸಮರ್ಥಿಸುವ ನೆಪದಲ್ಲಿ ಸಮಕಾಲೀನ ಅಡಂಬರದ ಮತ್ತು ಅಗ್ಗದ ಜನಪ್ರಿಯ ದುರಂತನಾಟಕಗಳನ್ನು ಗೇಲಿ ಮಾಡಿದ್ದಾನೆ. ಕ್ರಿಸ್ಟಫರ್ ಮಾರ್ಲೊ ಬರೆದ ಟ್ಯಾಂಬರ್‍ಲೀನ್ (1590) ನಾಟಕದಲ್ಲಿ ಬರುವ ಅಡೆತಡೆಯಿಲ್ಲದ ಸರಳ ರಗಳೆಯನ್ನು ಹೀಯಾಳಿಸಿದ್ದಾನೆ. ಸುಲಭಸಹಜ ಶೈಲಿಯವನಾದ ಈತ ಆಧುನಿಕ ಇಂಗ್ಲಿಷ್ ಗದ್ಯದ ಪ್ರವರ್ತಕನೆನಿಸಿದ್ದಾನೆ. ಫ್ರೆಂಚ್ ವೈದ್ಯನೂ ವಿಡಂಬನಕಾರನೂ ಅದ ರ್ಯಾಬಲೆಯ ಪ್ರಭಾವ ಇವನ ಶೈಲಿಯಲ್ಲಿ ಕಂಡು ಬರುತ್ತದೆ.

	ಅನಾಟಮಿ ಅಫ್ ಅಬ್ಸರ್ಡಿಟಿ (1589), ಪಿಯರ್ಸ್ ಪೆನಿಲೆಸ್, ಹಿಸ್ ಸಪ್ಲಿಕೇಷನ್ ಟು ದಿ ಡೆವಿಲ್ (1592), ಹ್ಯಾವ್ ವಿತ್ ಯು ಟು ಸ್ಯಾಫ್ರನ್ ವಾಲ್ಡನ್ (1596) - ಇವೆಲ್ಲ ಪ್ಯೂರಿಟನರ ವಿರುದ್ಧ ಈತ ಬರೆದ ಮುಖ್ಯ ಕೃತಿಗಳು. ಸ್ಟ್ರಿಂಗ್, ದಿ ಸ್ವೀಟ್ ಸ್ಪ್ರಿಂಗ್, ಈಸ್ ದಿ ಇಯರ್ಸ್ ಪ್ಲೆಸೆಂಟ್ ಕಿಂಗ್ ಎಂಬ ಪ್ರಸಿದ್ಧ ಕವನ ಇರುವುದು ಈತನ ಸಮರ್ಸ್ ಲ್ಯಾಸ್ಟ್ ವಿಲ್ ಅಂಡ್ ಟೆಸ್ಟ್‍ಮೆಂಟ್ (1600) ಎಂಬ ಹರ್ಷನಾಟಕದಲ್ಲಿ. ಕ್ರೈಸ್ಟ್ಸ್ ಟಿಯರ್ಸ್ ಓವರ್ ಜಿರೂಸಲೆಮ್ (1593) ಎಂಬಲ್ಲಿ ಪಶ್ಚಾತ್ತಾಪದ ಸುಳುವಿದೆ. ದಿ ಅನ್‍ಫಾರ್ಚುನೇಟ್ ಟ್ರ್ಯಾವಲರ್, ಅರ್ ದಿ ಲೈಫ್ ಜ್ಯಾಕ್ ವಿಲ್ಟನ್ (1594) ಎಂಬುದು ಸಾಹಸಮಯ ಜೀವನಚಿತ್ರಣ. ಇದು ಅಂದಿಗೆ ಜನಪ್ರಿಯವಾಗಲಿಲ್ಲ. ಸರ್ಕಾರವನ್ನು ಕಟುವಾಗಿ ಟೀಕಿಸುವ ದಿ ಐಲ್ ಅಫ್ ಡಾಗ್ಸ್ (ಈಗ ಈ ಕೃತಿ ಅನುಪಲಬ್ಧ) ಎಂಬ ಪ್ರಹಸನದಿಂದಾಗಿ ಈತ ಕಾರಾಗೃಹವಾಸನವನ್ನು ಅನುಭವಿಸಬೇಕಾಯಿತು. ಲೆಂಟನ್ ಸ್ಟಫ್ (1599) ಎಂಬುದು ಈತನ ಕೊನೆಯ ಕೃತಿ, ಪ್ರಹಸನ. 								(ಎಚ್.ಎಚ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಇವನು ಷೇಕ್ಸ್‍ಪಿಯರನ ಸಮಕಾಲೀನ. ವಿಶ್ವವಿದ್ಯಾನಿಲಯಕ್ಕೆ ಕಾಲಿಡದ ಷೇಕ್ಸ್‍ಪಿಯರನು ಲಂಡನಿಗೆ ಬಂದು ನಾಟಕಗಳನ್ನು ಬರೆಯುವಾಗಲೇ ವಿಶ್ವವಿದ್ಯಾನಿಲಯದ ಶಿಕ್ಷಣದ ಭಾಗವಿದ್ದ ಹಲವರು ಯುವಕರೂ ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ಇವರನ್ನು `ಯುನಿವರ್ಸಿಟಿ ವಿಟ್ಸ್ ಎಂದು ಕರೆಯುತ್ತಾರೆ. ನ್ಯಾಷ್ ಈ ಗುಂಪಿನವನು.
												ಪರಿಷ್ಕರಣೆ
											ಎಲ್.ಎಸ್.ಶೇಷಗಿರಿರಾವ್